ಚೀಕಲಪರವಿ
ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಒಂದು ಗ್ರಾಮ. ತುಂಗಭದ್ರಾನದಿಯ ದಡದಲ್ಲಿದೆ. ಇದು ಕರ್ನಾಟಕದ ದಾಸಸಾಹಿತ್ಯ ಪರಂಪರೆಯಲ್ಲಿ ಎರಡನೆಯ ಘಟ್ಟದ ಪ್ರಮುಖರಾದ ವಿಜಯದಾಸರ ಜನ್ಮಸ್ಥಳ. ಆ ಕಾರಣಕ್ಕಾಗಿಯೇ ಇದರ ಪ್ರಸಿದ್ಧಿ. ಕ್ರಿ.ಶ. 1687ರಲ್ಲಿ ಈ ಊರಿನ ಬಡ ಬ್ರಾಹ್ಮಣ ಮನೆತನದಲ್ಲಿ ವಿಜಯದಾಸರು ಜನ್ಮತಾಳಿದರು. ದಾಸಶ್ರೇಷ್ಟರಾದ ಪುರಂದರದಾಸರ ಅನಂತರ 25,000 ಕನ್ನಡ ಪದಗಳನ್ನು ರಚಿಸಿದ ಕೀರ್ತಿ ವಿಜಯದಾಸರದು. ಇದೇ ಜಿಲ್ಲೆಯ ನೆರೆಹೊರೆಯ ಊರುಗಳಲ್ಲಿ ಜನಿಸಿ ಪ್ರಸಿದ್ಧರಾದ ಗೋಪಾಲದಾಸ, ಜಗನ್ನಾಥದಾಸರಿಗೂ ವಿಜಯದಾಸರೇ ಮಾರ್ಗದರ್ಶಕರಾಗಿದ್ದರು. ಚೀಕಲಪರವಿ, ಇವರ ಕಾಲದಲ್ಲಿ ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ಚಡುವಟಿಕೆಗಳ ಕೇಂದ್ರವಾಗಿದ್ದಿರಬೇಕು. ವಿಜಯದಾಸರು ವಾಸಿಸುತ್ತಿದ್ದ ಅವರ ಮಗಳ ಮನೆಯೊಂದು ಈಗ ಚೀಕಲಪರವಿಯಲ್ಲಿದೆ. ಅವರು ಉಪಯೋಗಿಸುತ್ತಿದ್ದುದೆಂದು ಹೇಳಲಾಗುವ ಗಂಧ ತೇಯುವ ಸಾಣಿಕಲ್ಲೂ ಅಲ್ಲಿ ಇದೆ. ನದಿಯ ದಂಡೆಯ ಹತ್ತಿರ ಶ್ರೀಪಾದರಾಜರು ನೆಟ್ಟು ಬೆಳೆಸಿದ್ದೆಂದು ಹೇಳಲಾಗುವ ಒಂದು ಅಶ್ವತ್ಥವೃಕ್ಷವಿದೆ. ಪ್ರತಿವರ್ಷ ಚೀಕಲಪರಿವಿಯಲ್ಲಿ ವಿಜಯದಾಸರ ಆರಾಧನೆ ಜರುಗುತ್ತದೆ.      		(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ